ಸೈಲೂರಿಯನ್ ಸ್ತೋಮಗಳು
	ಸು.395 ದಶಲಕ್ಷ ವರ್ಷ ಮತ್ತು 440-430 ದಶಲಕ್ಷ ವರ್ಷ ಪ್ರಾಚೀನದ ನಡುವಿನ ಕಾಲಾವಧಿಗೆ ಸೇರಿದ ಶಿಲಾವ್ಯವಸ್ಥೆ (ಸೈಲೂರಿಯನ್ ಸಿಸ್ಟಮ್). ಇದು ಇಂಗ್ಲೆಂಡ್ ಮತ್ತು ವೇಲ್ಸ್ ಗಡಿಪ್ರದೇಶದಲ್ಲಿ ಹೊರಚಾಚಿದೆ. ಇದಕ್ಕೆ ಸೈಲೂರಿಯನ್ ಸ್ತೋಮಗಳೆಂದು ಹೆಸರಿಟ್ಟವನು ಖ್ಯಾತ ಮರ್ಚಿಸನ್ ಎಂಬ ಭೂವಿಜ್ಞಾನಿ (1835). ಈತ ಈಗಿನ ಆರ್ಡೊವೀಸಿಯನ್ ಸ್ತೋಮವನ್ನೂ ಇದರೊಡನೆ ಸೇರಿಸಿದ್ದ. ಆರ್ಡೊವೀಸಿಯನ್ ಸ್ತೋಮವನ್ನು ಬೇರ್ಪಡಿಸಿದ ಅನಂತರ, ಉಳಿದ ಉತ್ತರಾರ್ಧಕ್ಕೆ ಮಾತ್ರ ಸೈಲೂರಿಯನ್ ಸ್ತೋಮ ಎಂದು ಹೆಸರಾಯಿತು. ಸ್ವೀಡನ್ ಮತ್ತು ಯುರೋಪ್ ಖಂಡಭಾಗಗಳಲ್ಲಿಯ ಈ ಸ್ತೋಮಗಳಿಗೆ ಗೊಟ್‍ಲ್ಯಾಂಡಿಯನ್ ಸ್ತೋಮಗಳು ಎಂಬ ಹೆಸರಿದೆ. 

	ವೇಲ್ಸ್ ಮತ್ತು ಷ್ರೋಪ್‍ಷೈರ್ ಪ್ರದೇಶಗಳಲ್ಲಿ ಸೈಲೂರಿಯನ್ ಸ್ತೋಮ ಆರ್ಡೊವೀಸಿಯನ್ ಸ್ತೋಮದ ಮೇಲೂ ಹಳೆಕೆಂಪು ಮರಳು ಶಿಲಾವರ್ಗದ ಕೆಳಗೂ ನಿಕ್ಷೇಪಗೊಂಡಿದೆ. ಮರ್ಚಿಸನ್ ಈ ಸ್ತೋಮದ ಜೀವಪರಂಪರೆಯನ್ನು ನಿರ್ಧರಿಸಿದ. ಇದೇ ಜೀವಪರಂಪರೆಯನ್ನು ಸರಿದೂಗುವ ಜೀವ್ಯವಶೇಷಗಳಿರುವ ಇತರ ಶಿಲಾಸ್ತೋಮಗಳು ಪ್ರಪಂಚದ ಬೇರೆ ಭಾಗಗಳಲ್ಲಿಯೂ ಇರುವುದು ಪರಿಶೋಧನೆಗಳಿಂದ ವ್ಯಕ್ತವಾಗಿದೆ. ಇಂಥವು ಎಲ್ಲೇ ಇರಲಿ, ಇವುಗಳ ಶಿಲಾಸಂಯೋಜನೆ, ಉತ್ಪತ್ತಿವಿಧಾನ ಮತ್ತು ಕೆಳಗಿನ ಮತ್ತು ಮೇಲಿನ ಶಿಲಾಸ್ತೋಮಗಳ ನಡುವಿನ ಸಂಪರ್ಕ ಇವೆಲ್ಲವನ್ನೂ ಸೈಲೂರಿಯನ್ ಸ್ತೋಮಗಳೆಂದೇ ಹೆಸರಿಸಲಾಗಿದೆ. 

	ಆರ್ಡೊವೀಸಿಯನ್ ಕಾಲದ ಅನಂತರ ಬ್ರಿಟಿಷ್ ದ್ವೀಪಗಳಲ್ಲಿ ಭೂಚಲನೆಯಾಯಿತು. ಇದರ ಪರಿಣಾಮವಾಗಿ ಅಗಾಧಪ್ರಮಾಣದ ಶಿಲಾರಸ ಹೊರಹೊಮ್ಮಿತು. ಈ ಪ್ರಕೃತಿ ಚಟುವಟಿಕೆಗಳ ಅನಂತರ ಆರ್ಡೊವೀಸಿಯನ್ ಕಾಲದಲ್ಲಿದ್ದ ವಾತಾವರಣ ಮತ್ತೆ ಉಂಟಾಯಿತು. ಸೈಲೂರಿಯನ್ ಕಾಲದ ನಿಕ್ಷೇಪ ಪ್ರದೇಶ ವೇಲ್ಸ್‍ನಿಂದ ಈಶಾನ್ಯಾಭಿಮುಖ ವಾಗಿ ಸ್ಕ್ಯಾಂಡಿನೇವಿಯದವರೆಗೆ ವಿಸ್ತರಿಸಿತ್ತು; ಪೂರ್ವಾಭಿಮುಖವಾಗಿ ಗೊಟ್‍ಲ್ಯಾಂಡ್ ಅಥವಾ ಪೂರ್ವಬಾಲ್ಟಿಕ್‍ವರೆಗೂ ವ್ಯಾಪಿಸಿತ್ತು. ಇವುಗಳ ಮೂರು ಮುಖಗಳು ಹೀಗಿವೆ : 1. ಗ್ರ್ಯಾಪ್ಟೊಲೈಟ್ ಅವಶೇಷಗಳಿಂದ ಕೂಡಿದ ಆಳನಿಕ್ಷೇಪ (ಜೇಡುಶಿಲೆಗಳು ಮತ್ತು ಪ್ಲ್ಯಾಗಿ ಮರಳು ಶಿಲೆಗಳು), 2. ಚಿಪ್ಪುಗಳಿಂದ ಕೂಡಿದ ತೀರನಿಕ್ಷೇಪ (ನೊರಜು ಸುಣ್ಣಶಿಲೆ ಮತ್ತು ಸುಣ್ಣಮಿಶ್ರ ಜೇಡುಶಿಲೆಗಳು), 3. ಹವಳಗಳು ಮತ್ತು ಸ್ಟ್ರೊಮಟೊಮೊರಾಯ್ಡ್ ಸುಣ್ಣಶಿಲೆಗಳು ಮತ್ತು ಡಾಲೊಮೈಟ್‍ಗಳನ್ನು ಹೊಂದಿರುವ ಮಧ್ಯಪ್ರದೇಶ ನಿಕ್ಷೇಪಗಳು. 

	ಗ್ರ್ಯಾಪ್ಟೊಲೈಟ್‍ನಿಂದ ಕೂಡಿದ ಜೇಡುಶಿಲಾನಿಕ್ಷೇಪಕ್ಕೂ ಚಿಪ್ಪುಗಳಿಂದ ಕೂಡಿದ ಸುಣ್ಣ ಶಿಲಾನಿಕ್ಷೇಪಕ್ಕೂ ಇರುವ ವ್ಯತ್ಯಾಸ ಹೆಚ್ಚು. ಇದು ಸೈಲೂರಿಯನ್ ಸ್ತೋಮದ ಕೆಳಭಾಗದಲ್ಲಿ ಬಲು ಸ್ಪಷ್ಟವಾಗಿಯೂ ಮಧ್ಯ ಮತ್ತು ಮೇಲ್ಭಾಗಗಳಲ್ಲಿ ಸ್ವಲ್ಪಮಾತ್ರವೂ ಕಂಡುಬರುತ್ತದೆ. ಕೆಲವು ಪ್ರದೇಶಗಳಲ್ಲಿ ಅತಿಯಾದ ಉಷ್ಣದಿಂದ ಅಲ್ಲಿಯ ನೀರು ಆವಿಯಾಗುವು ದರ ಮೂಲಕ ಉಪ್ಪು ಮತ್ತು ಜಿಪ್ಸಮ್‍ಗಳು ನಿಕ್ಷೇಪಗೊಂಡಿವೆ. ವಿಶಾಲ ಸರೋವರಗಳು ಮತ್ತು ಇತರ ಭೂಜಲಾಶಯಗಳಲ್ಲಿ ಭೂಜಲನಿಕ್ಷೇಪ ರೂಪುಗೊಂಡಿದೆ. ಇವೆಲ್ಲ ಸೈಲೂರಿಯನ್ ಸ್ತೋಮಗಳ ವೈಶಿಷ್ಟ್ಯ.

	ಸೈಲೂರಿಯನ್ ಕಾಲದ ಅಂತ್ಯದಲ್ಲಿ ಬೃಹತ್ ಭೂಚಲನೆ ಆಯಿತು. ಕೇಂಬ್ರಿಯನ್-ಆರ್ಡೊವೀಸಿಯನ್-ಸೈಲೂರಿಯನ್ ಸ್ತೋಮಗಳು ಈ ಭೂಚಲನೆಗೆ ಈಡಾಗಿ ಕೆಲೆಡೋನಿಯನ್ ಪರ್ವತಶ್ರೇಣಿಗಳಾಗಿ ಮೇಲೆತ್ತಲ್ಪಟ್ಟಿವೆ. ಕೆಲೆಡೋನಿಯನ್ ಪರ್ವತಗಳು ಈಶಾನ್ಯಾಭಿಮುಖ ವಾಗಿ ಸ್ಕಾಂಡಿನೇವಿಯದವರೆಗೆ ಹಬ್ಬಿವೆ. ಇವುಗಳ ಒಂದು ಶಾಖೆ ಉತ್ತರ ಫ್ರಾನ್ಸ್, ದಕ್ಷಿಣ ಜರ್ಮನಿಯ ಮೂಲಕ ಆಸ್ಟ್ರಿಯದ ಉತ್ತರದ ವರೆಗೆ ಹಬ್ಬಿದೆ. ಚೆಕೊಸ್ಲೊವಾಕಿಯದಲ್ಲಿರುವ ಬಹೀಮಿಯನ್ ಶಿಲಾಪರಂಪರೆ ಕೂಡ ಸೈಲೂರಿಯನ್ ಸ್ತೋಮವೇ. ಇದು ಗ್ರ್ಯಾಪ್ಟೊಲೈಟುಗಳಿಂದ ಕೂಡಿದ ಜೇಡು ಶಿಲಾನಿಕ್ಷೇಪ. 

	ಉತ್ತರ ಅಮೆರಿಕ : ಸೈಲೂರಿಯನ್ ಕಾಲದ ಆದಿಯಲ್ಲಿ ಉತ್ತರ ಅಮೆರಿಕದ ಭೂಭಾಗವೆಲ್ಲ ಕೆಳಮಟ್ಟದ ಮೈದಾನ ಪ್ರದೇಶವಾಗಿತ್ತು. ಅಪಲೇಶಿಯನ್ ಪರ್ವತಗಳು ಮಾತ್ರ ಎದ್ದು ಕಾಣುತ್ತಿದ್ದುವು. ಭೂಸಮತೋಲದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇಡೀ ಭೂಭಾಗವೆಲ್ಲ ಸಾಗರಾಕ್ರಮಣಕ್ಕೆ ತುತ್ತಾಗುವ ಸ್ಥಿತಿ ಅದಾಗಿತ್ತು. ಅಪಲೇಶಿಯನ್ ನಿಕ್ಷೇಪಪ್ರದೇಶ, ಕಾರ್ಡಿಲೆರಾನ್ ನಿಕ್ಷೇಪಪ್ರದೇಶ ಮತ್ತು ಅವರೆಡರ ಮಧ್ಯದ ಭೂಭಾಗಗಳು ಸೈಲೂರಿಯನ್ ಕಾಲದಲ್ಲಿ ಸಾಗರಗಳಿಂದ  ಆಕ್ರಮಿಸಲ್ಪಟ್ಟಿದ್ದುವು. ಸೈಲೂರಿಯನ್ ಶಿಲಾಪರಂಪರೆಯಲ್ಲಿ ಎರಡು ಅನನುರೂಪ್ಯತೆಗಳು ಕಂಡುಬರುತ್ತವೆ. ಇವು ಸಾಗರಗಳ ನಿರ್ಗಮನ ಮತ್ತು ಪುನರಾಗಮನಗಳನ್ನು ಸೂಚಿಸುತ್ತವೆ. ಪ್ರತಿ ಪುನರಾಗಮನ ದೊಡನೆ ಬಂದ ಜೀವರಾಶಿ ಹಿಂದಿನ ಜೀವರಾಶಿಗಳಿಗಿಂತಲೂ ಭಿನ್ನ. 

	ಸೈಲೂರಿಯನ್ ಸ್ತೋಮದ ಕೆಳಭಾಗ ಪೆನ್ಸಿಲ್ವೇನಿಯದಿಂದ ಅಲಬಾಮದವರೆಗೆ ಸು. 305 ಮೀ ದಪ್ಪದ ಮರಳು ಶಿಲೆಗಳಿಂದ ಆಗಿದೆ. ಇವಕ್ಕೆ ಮೆಡಿನ ಮರಳುಶಿಲೆಗಳೆಂದು ಹೆಸರು. ಇವು ನವಅಪಲೇಶಿಯನ್ ಪರ್ವತಗಳಾಗಿ ಹೊರಹೊಮ್ಮಿವೆ. ಮೆಡಿನ ಮರಳುಶಿಲೆ ಸಂಪೂರ್ಣವಾಗಿ ಜೀವ್ಯವಶೇಷರಹಿತವಾಗಿದೆ. ಅದು ಸಮುದ್ರಮಟ್ಟಕ್ಕಿಂತಲೂ ಎತ್ತರಪ್ರದೇಶದಲ್ಲಿ ನಿಕ್ಷೇಪಗೊಂಡಿತೆಂಬುದಕ್ಕೆ ಆಧಾರಗಳಿವೆ. ಪಶ್ಚಿಮಕ್ಕೆ ಹೋದಂತೆ ಇದು ಸಾಗರಜನಿತ ಜೇಡುಶಿಲೆ ಜೇಡುಶಿಲೆಯೊಡನೆಯೂ ಜೇಡುಶಿಲೆ ಸುಣ್ಣಶಿಲೆಯೊಡನೆಯೂ ಬೆರೆಯುತ್ತದೆ. ಮೆಡಿನ ಮರಳುಶಿಲೆಯ ನಿಕ್ಷೇಪಾನಂತರ ಸಾಗರಗಳ ನಿರ್ಗಮನವಾಯಿತು. ಇದು ನಡೆದದ್ದು ಅಲ್ಪಕಾಲಾವಧಿಯ ತನಕ ಮಾತ್ರ. ಮುಂದೆ ಸಾಗರಗಳು ನಿರ್ಗಮಿಸಿದುವು. ಮತ್ತೆ ಸಾಗರಗಳ ಪುನರಾಕ್ರಮಣವಾಯಿತು. ಹೆಚ್ಚು ಭಾಗಗಳು ಸಾಗರದ ಅಡಿ ಸೇರಿದುವು. ಉತ್ತರದಿಂದ ಪೆಸಿಫಿಕ್ ಸಾಗರ ಕೆನಡದ ವಿಶಾಲಭೂಭಾಗವನ್ನು ಆಕ್ರಮಿಸಿಕೊಂಡು ಕಾರ್ಡಿಲೆರಾನ್ ನಿಕ್ಷೇಪದ ಪ್ರದೇಶದವರೆಗೆ ವ್ಯಾಪಿಸಿತು. 

	ಸೈಲೂರಿಯನ್ ಸ್ತೋಮದ ಮಧ್ಯಭಾಗ ನಯಾಗರ ಜಲಪಾತ ಪ್ರದೇಶದಲ್ಲಿ ಬಲು ಚೆನ್ನಾಗಿ ರೂಪುಗೊಂಡಿದೆಯಾದ್ದರಿಂದ ಅದಕ್ಕೆ ನಯಾಗರ ಶಿಲಾಶ್ರೇಣಿ ಎಂದು ಹೆಸರಾಯಿತು. ಈ ಸ್ತೋಮ ವಾಯವ್ಯಕ್ಕೆ ಅಯೋವದವರೆಗೂ ಪಶ್ಚಿಮಕ್ಕೆ ಟೆಕ್ಸಾಸ್ ಮತ್ತು ಓಕ್ಲಹಾಮದವರೆಗೂ ಹಬ್ಬಿದೆ. ಇದು ಏಕರೀತಿಯ ಶಿಲಾಸಂಯೋಜನೆ ಮತ್ತು ಜೀವ್ಯವಶೇಷಗ ಳಿಂದ ಕೂಡಿದೆ. ಆದ್ದರಿಂದ ಈ ಪ್ರದೇಶಗಳೆಲ್ಲ ಒಂದೇ ಸಾಗರದಡಿ ಇದ್ದುವೆಂದು ತಿಳಿಯಲಾಗಿದೆ. ಈ ಸಾಗರಕ್ಕೆ ಉತ್ತರ ಆರ್ಕ್‍ಟಿಕ್ ಸಮುದ್ರದೊಡನೆ ಸಂಪರ್ಕವಿತ್ತು. ಕ್ವಿಬೆಕ್, ನ್ಯೂಬ್ರನ್ಸ್‍ವಿಕ್ ಮತ್ತು ಮೈನ್ ಪ್ರದೇಶಗಳು ಜ್ವಾಲಾಮುಖಿಗಳ ಕಾರ್ಯಾಚರಣೆಗೆ ಈಡಾಗಿ ಅಲ್ಲಿ ಸು. 1220ಮೀ ಮಂದದ ಬಸಾಲ್ಟ್ ಶಿಲೆರೂಪುಗೊಂಡಿತು. ಈ ಶಿಲಾಶ್ರೇಣಿಯಲ್ಲಿ ಜೇಡು ಮತ್ತು ಸುಣ್ಣ ನಿಕ್ಷೇಪಗಳೇ ಹೆಚ್ಚಾಗಿರುವುದ ರಿಂದ,  ಆ  ಹೊತ್ತಿಗೆ  ಅಪಲೇಶಿಯನ್  ಪರ್ವತಗಳು  ಬಲುಮಟ್ಟಿಗೆ  ಸವೆದು ಹೋಗಿರಬೇಕೆಂದು ಊಹಿಸಲಾಗಿದೆ. ನಯಾಗರ ಶಿಲಾಶ್ರೇಣಿ ಅನೇಕ ಅದುರುಗಳಿಗೆ ಬೀಡಾಗಿದೆ. ಈ ಶ್ರೇಣಿ ನಿಕ್ಷೇಪಗೊಂಡ ಮೇಲೆ ಅಪಲೇಶಿಯನ್ ಪ್ರದೇಶದ ಕೆಲವು ಭಾಗಗಳು ಮತ್ತು ಸರೋವರ ಪ್ರದೇಶಗಳು ಉಳಿದು ಇತರ ಭಾಗಗಳಿಂದ ಸಾಗರಗಳು ಹಿಂಜರಿದುವು. ನ್ಯೂಯಾರ್ಕ್, ಮಿಶಿಗನ್ ಪ್ರದೇಶಗಳಲ್ಲಿ ಅತಿಯಾದ ಉಷ್ಣ ವಾತಾವರಣದಿಂದ ಉಪ್ಪು ಮತ್ತು ಜಿಪ್ಸಮ್ ನಿಕ್ಷೇಪಗೊಂಡಿವೆ. ಸೈಲೂರಿಯನ್ ಸುಣ್ಣನಿಕ್ಷೇಪ ಮತ್ತು ಡಾಲೊಮೈಟ್‍ಗಳು ಸಂಚಯನಗೊಂಡಿವೆ. ಇವುಗಳಲ್ಲಿಯ ಜೀವ್ಯವಶೇಷಗಳು ಎಂದರೆ ಲವಣಯುಕ್ತ ನೀರಿನಲ್ಲಿ ವಾಸಿಸುವ ಪ್ರಾಣಿಗಳು. ಈ ಪೈಕಿ ಯೂರಿಪ್ಟರಿಸ್ ಒಂದು. ಸೈಲೂರಿಯನ್ ಯುಗ ಯಾವ ಭೂಚಲನೆಯೂ ಉಂಟಾಗದೆ ಶಾಂತರೀತಿಯಲ್ಲಿ ಕೊನೆಗೊಂಡಿತು. 

	ಭಾರತ : ಸ್ಪಿಟಿ ಪ್ರದೇಶದಲ್ಲಿ ಸೈಲೂರಿಯನ್ ಸ್ತೋಮ ಆರ್ಡೊವೀಸಿಯನ್ ಸ್ತೋಮದ ಮೇಲೆ ಅನುರೂಪ ಸಂಪರ್ಕ ಹೊಂದಿ ನಿಕ್ಷೇಪಗೊಂಡಿದೆ. ಈ ಸ್ತೋಮದಲ್ಲಿ ವಿಶೇಷವಾಗಿ ಹವಳ ಮತ್ತು ಬ್ರ್ಯಾಕಿಯೊಪೊಡ ಗುಂಪಿನ ಅವಶೇಷಗಳಿವೆ. ಮೇಲ್ಭಾಗದಲ್ಲಿ ಬೆಣಚುಶಿಲಾ ಸಮುದಾಯವಿದೆ. ಇವಕ್ಕೆ ಮ್ಯೂತ್‍ಬೆಣಚುಶಿಲೆಗಳೆಂದು ಹೆಸರು. ಇದರ ಕೆಳಭಾಗ ಸೈಲೂರಿಯನ್ ಕಾಲಕ್ಕೆ ಸೇರಿದ್ದು. 

	ಕಾಶ್ಮೀರ ಪ್ರದೇಶದ ಲಿಡಾರ್ ಕಣಿವೆಯಲ್ಲಿಯೂ ಸೈಲೂರಿಯನ್ ಸ್ತೋಮ ಆಂಟಿಕ್ಲೈನ್ ರೂಪದಲ್ಲಿ ಹೊರಕಾಣುತ್ತದೆ. ಇದು ಮರಳುಮಿಶ್ರಿತ ಜೇಡುಶಿಲೆ ಮತ್ತು ಹಳದಿ ಸುಣ್ಣಶಿಲೆಗಳಿಂದ ಕೂಡಿ ಶಿಲಾಸಂಯೋಜನೆಯಲ್ಲಿ ಕೇಂಬ್ರಿಯನ್ ಆರ್ಡೊವೀಸಿಯನ್ ಸ್ತೋಮ ಗಳನ್ನು ಹೋಲುತ್ತದೆ. ಇವುಗಳಲ್ಲಿ ಹೇರಳ ಜೀವ್ಯವಶೇಷಗಳಿರುವುದ ರಿಂದ ಇವನ್ನು ಗುರುತಿಸುವುದು ಸುಲಭ. ಭಾರತದಲ್ಲಿ ಈ ಕಾಲದ ಜೀವರಾಶಿ ಉತ್ಕøಷ್ಟ ರೀತಿಯಲ್ಲಿ ರಕ್ಷಿಸಲ್ಪಟ್ಟಿರುವ ಕೆಲವೇ ಪ್ರದೇಶಗಳ ಪೈಕಿ ಇದೂ ಒಂದು. ಆರ್ತಿನ್, ಸ್ಟ್ರೋಪೊಮಿನ ಎಂಬ ಬ್ರೇಕಿಯೋಪೋಡ್‍ಗಳು, ಹವಳಗಳು ಮತ್ತು ಕ್ರೈನಾಯಿಡ್‍ಗಳು ಈ ಸ್ತೋಮಗಳಲ್ಲಿಯ ಪ್ರಮುಖ ಜೀವ್ಯವಶೇಷಗಳು. 

	ಸೈಲೂರಿಯನ್ ಕಾಲದ ಜೀವರಾಶಿ: ಸೈಲೂರಿಯನ್ ಜೀವರಾಶಿ ಯಾದರೊ ಆರ್ಡೊವೀಸಿಯನ್ ಜೀವರಾಶಿಯ ನೇರಸಂತತಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇವೆರಡರ ಮಧ್ಯೆ ಇರುವ ವ್ಯತ್ಯಾಸ ಎಂದರೆ ಆರ್ಡೊವೀಸಿಯನ್ ಕಾಲದಲ್ಲಿ ಪ್ರಭಾವ ಗಳಿಸಿದ್ದ ಜೀವಿವರ್ಗಗಳು ಸೈಲೂರಿಯನ್ ಕಾಲದಲ್ಲಿ ಅವನತಿಯ ಹಾದಿ ಹಿಡಿದುವು. ಆ ಕಾಲದಲ್ಲಿ ಅಪ್ರಮುಖವೆನಿಸಿದ್ದ ಜೀವಿವರ್ಗಗಳು ಶೀಘ್ರವಾಗಿ ಉನ್ನತಿಹೊಂದಿ ಪ್ರಭಾವಸ್ಥಾನ ಗಳಿಸಿವೆ. ಈ ವ್ಯತ್ಯಾಸ ಪ್ರಭಾವಜೀವಿ ವರ್ಗಗಳ ಸಂಖ್ಯಾ ಪ್ರಮಾಣ ಮತ್ತು ಅವುಗಳೊಳಗಣ ವಿಕಾಸಮಟ್ಟಕ್ಕೆ ಸೀಮಿತಗೊಂಡಿದೆ. 

	ಗ್ರ್ಯಾಪ್ಟೊಲೈಟ್‍ಗಳಲ್ಲಿ ಈ ಅವನತಿ ಎದ್ದು ಕಾಣುತ್ತದೆ. ಆರ್ಡೊವೀಸಿ ಯನ್ ಗ್ರ್ಯಾಪ್ಟೊಲೈಟ್‍ಗಳ ಪೈಕಿ ಕ್ಲೈಮಕೊಗ್ರ್ಯಾಪ್ಟಸ್ ಮತ್ತು ಡಿಪ್ಲೊಗ್ರ್ಯಾಪ್ಟಸ್ ಎಂಬ ಎರಡು ಜಾತಿಗಳು ಮಾತ್ರ ಸೈಲೂರಿಯನ್‍ನಲ್ಲಿ ಉಳಿದುಕೊಂಡಿವೆ. ಅವು ವೇಲಿಂಟಿಯನ್ ಶಿಲಾಶ್ರೇಣಿಯಲ್ಲಿ ಮಾತ್ರ ಇವೆ. ಹೀಗಿದ್ದರೂ ಸೈಲೂರಿಯನ್ ಕಾಲದಲ್ಲಿ  ಎಲ್ಲ ಪ್ರಾಣಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲೇ ಇದ್ದುವು. ಅವೆಲ್ಲ ಮಾನೊಗ್ರ್ಯಾಪ್ಟಸ್ ಜಾತಿಗೆ ಸೇರಿದವು. ಅಮೆರಿಕದಲ್ಲಿ ಮಾನೊಗ್ರ್ಯಾಪ್ಟಸ್‍ಗಳು ಕೆಲವು ಶಿಲಾಪಾದಗಳಲ್ಲಿ ಮಾತ್ರ ಕಾಣಸಿಗುತ್ತವೆ. ಇಂಡಿಯದ ಸ್ತೋಮಗಳಲ್ಲಿ ಇವು ಇಲ್ಲವೇ ಇಲ್ಲವೆಂದು ಹೇಳಲಾಗಿದ್ದರೂ ಕೆಲವೆಡೆ ಗ್ರ್ಯಾಪ್ಟೊಲೈಟ್ ಗಳಿರುವುದಾಗಿ ಹೇಳಲಾಗಿದೆ. ಮಾನೊಗ್ರ್ಯಾಪ್ಟಸ್‍ನ ಅನೇಕ ಅಲ್ಪಾವಧಿಯ ಪ್ರಕಾರಗಳು ಉದ್ಭವಗೊಂಡಿರುವುದರಿಂದ, ಅವು ಸೈಲೂರಿಯನ್ ಸ್ತೋಮಗಳನ್ನು ಅನೇಕ ಶಿಲಾಪಾದಗಳಾಗಿ ವಿಭಜಿಸಲು ಸಹಕಾರಿ ಯಾಗಿವೆ. 

	ಹವಳಗಳು ಅಭಿವೃದ್ಧಿಗೊಂಡು ಪ್ರಭಾವ ಬೀರುವಂತಾದುವು. ಅವುಗಳಲ್ಲಿ ಜೇನುಗೂಡಿನಂತಿರುವ ಫೇವೊಸೈಟಿಸ್, ಸರಪಣಿಯಂತಿರುವ ಹ್ಯಾಲಿಸೈಟಿಸ್ ಮತ್ತು ಕೊಳವೆಯಂತಿರುವ ಸಿರಿಂಗೊಪೋರ ಮುಖ್ಯ. ಇವೆಲ್ಲ ವಂಶನಷ್ಟಹೊಂದಿದ ಟ್ಯಾಬುಲೇಟ ಹವಳ ಶಾಖೆಗೆ ಸೇರಿದವು. ರೊಗೋಸ ಹವಳಗಳ ಆಕಾರ ಬಟ್ಟಲಿನಂತೆ. ಗ್ರ್ಯಾಪ್ಟೊಲೈಟ್‍ಗಳನ್ನು ಬಿಟ್ಟರೆ ಹವಳ ಮತ್ತು ಸ್ಟ್ರೊಮಟೊಪೊರಾಯಿಡ್‍ಗಳೇ ಅಧಿಕ ಸಂಖ್ಯೆಯಲ್ಲಿದ್ದುವು. ಬ್ರಿಯೊeóÉೂೀವಗಳು ಅಲ್ಲಲ್ಲಿ ಬೀಡು ಬಿಟ್ಟಿದ್ದುವು. 

	ಬ್ರೇಕಿಯೊಪೋಡಗಳು ತಮ್ಮ ಪ್ರಭಾವಸ್ಥಾನ ಉಳಿಸಿಕೊಂಡುವು. ಕೀಲುಬ್ರೇಕಿಯೊಪೋಡಗಳು ಹೆಚ್ಚುತ್ತ ಬಂದುವು. ಪೆಂಟಮೀರಸ್ ಮತ್ತು ಕಾಂಕಿಡಿಯಮ್ ಅಧಿಕ ಸಂಖ್ಯೆಯಲ್ಲಿ ಇದ್ದುವು. ಸ್ವಿರಿಫೆರ ಮತ್ತು ರಿಂಕೋನೆಲ್ಲಗಳೂ ಕಾಣಿಸಿಕೊಂಡುವು. ಟ್ರೈಪೋಬೈಟ್‍ಗಳು ಕೂಡ ಹೇರಳವಾಗಿದ್ದುವು. ಟ್ರೈಸ್ಯೊಕ್ಲಿಯಸ್ ಮತ್ತು ಅಸಪಸ್ ಜಾತಿಗಳು ಗತವಂಶಿಗಳಾದುವು. ಕೇಲಿಮೀನ್ ಮತ್ತು ಫೆಕಾಪ್ಸ್‍ಗಳು ಈ ಕಾಲದ ವಿಶಿಷ್ಟ ಜಾತಿಗಳು. ಟ್ರೈಲೊಬೈಟ್‍ಗಳು ಬಲು ಹೆಚ್ಚಾಗಿ ವಿಕಾಸಗೊಂಡಿ ದ್ದುವು. ಅನಂತರ ಅವುಗಳ ಅವನತಿಯ ಚಿಹ್ನೆಗಳೂ ಕಾಣಿಸಿಕೊಂಡುವು. ಕೆಲವು ಜಾತಿಯ ಟ್ರೈಲೊಬೈಟ್‍ಗಳು(ಖೈರೂರಸ್) ಮೈತುಂಬ ಮುಳ್ಳುಗಳನ್ನು ಬೆಳೆಸಿಕೊಂಡು ಭಯಂಕರ ರೂಪ ತಾಳಿದುವು. ಆಸ್ಟ್ರಕೋಡಗಳೂ ಹೇರಳವಾಗಿದ್ದುವು. ಸಾಗರಚೇಳುಗಳು ಇದ್ದಕ್ಕಿದ್ದಂತೆ ಹೆಚ್ಚಿ ಕೊನೆಗೆ ಗತವಂಶಿಗಳಾದುವು. ಯೂರಿಪ್ಟರಿಸ್ ಮತ್ತು ಟೆರಿಗೋಟಸ್ ಆ ಕಾಲದ ಬಲು ದೊಡ್ಡ ಸಾಗರ ಚೇಳುಗಳು. ಇತರ ಚೇಳುಗಳೂ ಇದ್ದುವು. 

	ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ಗೊಟ್‍ಲ್ಯಾಂಡ್ ದೇಶಗಳ ಸೈಲೂರಿಯನ್ ಸ್ತೋಮಗಳಲ್ಲಿ ಸಸ್ಯಾವಶೇಷಗಳು ಸಿಕ್ಕಿವೆ. ಇವನ್ನು ಭೂಸಸ್ಯಗಳೆಂದು ಪರಿಗಣಿಸಲಾಗಿದೆ. ಈ ಸ್ತೋಮಗಳಲ್ಲಿ ಆಸ್ಟ್ರಕೊಡರ್ಮ ಮತ್ಸ್ಯಗಳ ಅವಶೇಷಗಳಿರುವುದೂ ವರದಿಯಾಗಿದೆ. 	
												   (ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ